ಚಾಲ್ರ್ಸ್ (ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ದೊರೆಗಳು)
 
ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡನ್ನಾಳಿದ ದೊರೆಗಳು.
ಚಾಲ್ರ್ಸ್ I : 1600-1649. ಸ್ಟೂವರ್ಟ್ ಮನೆತನದ ಎರಡನೆಯ ದೊರೆ. ಈತ 1ನೆಯ ಜೇಮ್ಸನ (ಸ್ಕಾಟ್ಲೆಂಡಿನ 6ನೆಯ ಜೇಮ್ಸ್) ಮಗನಾಗಿ 1600ರಲ್ಲಿ ಹುಟ್ಟಿದ. 1616ರಲ್ಲಿ ವೇಲ್ಸ್ ರಾಜಕುಮಾರನಾಗಿ ಅಭಿಷಿಕ್ತನಾದ. ಚಾಲ್ರ್ಸ್ ಪಟ್ಟವೇರುವ ಮೊದಲು ರಾಜಕಾರಣದಲ್ಲಿ ವಿಶೇಷ ಆಸ್ಥೆ ವಹಿಸಿದವನಲ್ಲ. ಸ್ಪೇನಿನ ರಾಜಕುಮಾರಿಯನ್ನು ವರಿಸುವ ಉದ್ದೇಶದಿಂದ ಸ್ಪೇನಿಗೆ ಭೇಟಿ ನೀಡಿದ್ದೊಂದೇ ಈತನ ಆ ಕಾಲದ ಉಲ್ಲೇಖನೀಯ ಕಾರ್ಯ. ಈ ಯಾತ್ರೆ ಯಶಸ್ವಿಯಾಗಲಿಲ್ಲ. 
ಇದರಿಂದಾಗಿ ಸ್ಪೇನಿನ ಮೇಲೆ ಯುದ್ಧ ಮಾಡಬೇಕೆಂದು ತಂದೆಗೆ ಒತ್ತಾಯ ಹಾಕಿದ. ಮುಂದೆ 1624ರಲ್ಲಿ ಇವನು ಫ್ರಾನ್ಸಿನ ರಾಜಕುಮಾರಿ ಹೆನ್ರಿಯೆಟ್ಟ ಮರೀಯಳನ್ನು ವರಿಸಲು ಒಪ್ಪಂದವಾಯಿತು. 1625ರಲ್ಲಿ ಪಟ್ಟಕ್ಕೆ ಬಂದ ಮೇಲೆ ಆಕೆಯನ್ನು ಮದುವೆಯಾದ. 1625ರಲ್ಲಿ ಕರೆಯಲಾದ ಪಾರ್ಲಿಮೆಂಟ್‍ನ ಕಾಮನ್ಸ್ ಸಭೆಯಲ್ಲಿ ಪ್ಯುರಿಟನರೇ ಹೆಚ್ಚು ಸಂಖ್ಯೆಯಲ್ಲಿದ್ದರು. ದೊರೆ ಕ್ಯಾತೊಲಿಕ್ ಕನ್ಯೆಯನ್ನು ವರಿಸಿದ ಬಗ್ಗೆಯೂ ಸ್ಪೇನ್ ಮುಂದುವರಿಸುತ್ತಿದ್ದ ಯುದ್ಧದ ಕುರಿತು ತಮಗೆ ವಿವರಣೆಗಳನ್ನು ನೀಡದ ಬಗ್ಗೆಯೂ ಅವರು ಕ್ರುದ್ಧವಾಗಿದ್ದರು. ರಾಜನಿಗೆ ಟನ್ನೇಜ್ ಮತ್ತು ಪೌಂಡೇಜ್ ಅಧಿಕಾರವನ್ನು (ಸುಂಕ ಸಂಗ್ರಹಿಸುವ ಅಧಿಕಾರ) ನೀಡಲು ಅವರು ನಿರಾಕರಿಸಿದರು. 1626ರಲ್ಲಿ ಅವನು ಕರೆದ ಎರಡನೆಯ ಪಾರ್ಲಿಮೆಂಟ್ ಇನ್ನಷ್ಟು ಕ್ರುದ್ಧವಾಗಿತ್ತು. ಸ್ಪೇನಿನೊಡನೆ ನಡೆದ ಯುದ್ಧದಲ್ಲಿ ಕ್ಯಾಡಿಸ್‍ನ ವಿರುದ್ಧ ನಡೆಸಲಾದ ನೌಕಾ ಕಾರ್ಯಾಚರಣೆಯಲ್ಲಿ ಬ್ರಿಟನ್ನಿಗೆ ಸೋಲಾಗಿತ್ತು. ಇದಕ್ಕೆ ಬಕಿಂಗ್‍ಹ್ಯಾಮ ಕಾರಣವೆನ್ನಲಾಗಿದ್ದರಿಂದ ಅವನನ್ನು ರಾಜದ್ರೋಹದ ಆಪಾದನೆಗಾಗಿ ವಿಚಾರಣೆಗೆ ಗುರಿಪಡಿಸಬೇಕೆಂದು ಕಾಮನ್ಸ್ ಸಭೆ ಪ್ರಯತ್ನಿಸಿತು. ಇದನ್ನು ತಪ್ಪಿಸಲು ದೊರೆಪಾರ್ಲಿಮೆಂಟನ್ನು ವಿಸರ್ಜಿಸಿದ. ಆ ಸಮಯದಲ್ಲಿ ಯೂರೋಪಿನಲ್ಲಿ ಮೂವತ್ತು ವರ್ಷಗಳ ಯುದ್ಧ (1618-48) ನಡೆಯುತ್ತಿತ್ತು. ಧರ್ಮನಿಮಿತ್ತವಾಗಿ ಪ್ರಾಟೆಸ್ಟಂಟ್ ಮತ್ತು ಕ್ಯಾತೊಲಿಕ್ ಶಕ್ತಿಗಳ ನಡುವೆ ನಡೆಯುತ್ತಿದ್ದ ಯುದ್ಧವದು. ಫ್ರಾನ್ಸ್ ಮತ್ತು ಸ್ಪೇನ್‍ಗಳೊಡನೆ ಯುದ್ಧದಲ್ಲಿ ಅವನು ಆ ವೇಳೆಗೆ ಸಿಲುಕಿಕೊಂಡಿದ್ದ. ಹಣದ ತೊಂದರೆ ಹೆಚ್ಚಿತು. ಬಲವಂತದ ಸಾಲ ವಿಧಿಸಿದ. ಇದು ನ್ಯಾಯಬಾಹಿರವೆಂದು ನ್ಯಾಯಮೂರ್ತಿಗಳು ತೀರ್ಪಿತ್ತರು. ದೊರೆ ಶ್ರೇಷ್ಠ ನ್ಯಾಯಾಧೀಶನನ್ನೇ ವಜಾ ಮಾಡಿದ. ತನ್ನ ಕ್ರಮಕ್ಕೆ ಒಪ್ಪದ 70 ಜನರನ್ನು ಬಂಧಿಸಿದ. ಇವರಲ್ಲಿ ಕೆಲವು ನೈಟ್‍ಗಳೂ ಇದ್ದರು. ಸ್ಪೇನ್ ವಿರುದ್ಧ ನಡೆಸಿದ ಆಕ್ರಮಣ ಕಾರ್ಯದಲ್ಲಿ ಬಕಿಂಗ್‍ಹ್ಯಾಂ ಹಿಮ್ಮೆಟ್ಟಬೇಕಾಯಿತು. ರಾಜನಾಗಿ ಆಯ್ಕೆಯಾದ ತನ್ನ ಭಾವ ಫ್ರೆಡರಿಕ್‍ಗೆ ನೆರವು ನೀಡಲು ಚಾಲ್ರ್ಸ್ ಉತ್ಸುಕನಾಗಿದ್ದ. ಈ ಕಾರಣಗಳಿಂದಾಗಿ ಆತ 1628ರಲ್ಲಿ ಮೂರನೆಯ ಪಾರ್ಲಿಮೆಂಟನ್ನು ಆಮಂತ್ರಿಸಿದ. ದೊರೆ ಸ್ವೇಚ್ಛಾನುಸಾರವಾಗಿ ತೆರಿಗೆ ವಿಧಿಸುತ್ತಿದ್ದದ್ದನ್ನೂ ಜನರನ್ನು ಬಂಧಿಸುತ್ತಿದ್ದದ್ದನ್ನೂ ವಿರೋಧಿಸಿ ಕಾಮನ್ಸ್ ಸಭೆ ಕೂಡಲೇ ನಿರ್ಣಯಗಳನ್ನು ಮಾಡಿತು. ಹಕ್ಕುಗಳ ಮನವಿಯಲ್ಲಿ (ಪೆಟಿಷನ್ ಆಫ್ ರೈಟ್ಸ್) ತನ್ನ ದೂರುಗಳನ್ನೆಲ್ಲ ಉಲ್ಲೇಖಿಸಿತು. ಈ ಮನವಿಗೆ ಒಪ್ಪಿಗೆ ನೀಡಲು ದೊರೆ ಇಷ್ಟಪಡಲಿಲ್ಲವಾದರೂ ಖಾಸಗಿ ವಿಧೇಯಕದಂತೆ ಅದಕ್ಕೆ ಸಮ್ಮತಿ ನೀಡಲೇಬೇಕಾಯಿತು. ಇದು ಮ್ಯಾಗ್ನಕಾರ್ಟದಲ್ಲಿರುವ ವಿಚಾರಗಳ ಪುನರ್ಘೋಷಣೆಯೆಂದು ಭಾವಿಸಲ್ಪಟ್ಟಿದೆ. ಇದಾದೊಡನೆ ಬಕಿಂಗ್‍ಹ್ಯಾಮನನ್ನು ಅಧಿಕಾರದಿಂದ ವಜ ಮಾಡಬೇಕೆಂದು ಪಾರ್ಲಿಮೆಂಟ್ ಒತ್ತಾಯಿಸಿದಾಗ ದೊರೆ ಪಾರ್ಲಿಮೆಂಟನ್ನು ಮುಂದೂಡಿದ. ಅನಂತರ ಬಕಿಂಗ್‍ಹ್ಯಾಂ ಕೊಲೆಗೆ ಈಡಾದ.

1629ರಲ್ಲಿ ಚಾಲ್ರ್ಸ್ ನಾಲ್ಕನೆಯ ಪಾರ್ಲಿಮೆಂಟನ್ನು ಕರೆದ. ಟನ್ನೇಜ್ ಮತ್ತು ಪೌಂಡೇಜನ್ನು ದೊರೆ ಸಂಗ್ರಹಿಸುವುದನ್ನು ಪಾರ್ಲಿಮೆಂಟ್ ವಿರೋಧಿಸಿತು. ಅವನು ಕ್ಯಾತೊಲಿಕ್ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಯತ್ನಿಸುತ್ತಿರುವನೆಂಬ ಆಪಾದನೆಗೆ ಗುರಿಯಾದ. ಅವನ ಕೆಲವು ಧಾರ್ಮಿಕ ಸುಧಾರಣೆಗಳನ್ನು ಪಾರ್ಲಿಮೆಂಟ್ ಕಟುವಾಗಿ ಟೀಕಿಸಿತು. ದೊರೆ ಆ ಪಾರ್ಲಿಮೆಂಟನ್ನೂ ವಿಸರ್ಜಿಸಿ ಆಜ್ಞೆ ನೀಡಿದ. ಅದು ಸಭಾಪತಿಯನ್ನು ಬಲಾತ್ಕಾರದಿಂದ ಅವನ ಪೀಠದಲ್ಲಿ ಕುಳ್ಳಿರಿಸಿ ಮೂರು ನಿರ್ಣಯಗಳನ್ನು ಮಾಡಿತು. ಈ ಪೈಕಿ ಒಂದು ಹಕ್ಕುಗಳ ಮನವಿಯ ಸಿಂಧುತ್ವವನ್ನು ಪುನರುಚ್ಚರಿಸಿತು. ದೇಶದ ಧರ್ಮ ವ್ಯವಸ್ಥೆಯನ್ನು ಬದಲಾಯಿಸಲು ಯತ್ನಿಸುವವನು ದೇಶದ ಶತ್ರು ಎಂಬುದು ಇನ್ನೊಂದು ನಿರ್ಣಯದ ಒಕ್ಕಣೆ.
ಮುಂದೆ ಹನ್ನೊಂದು ವರ್ಷಗಳ ಕಾಲ (1629-40) ಚಾಲ್ರ್ಸ್ ಪಾರ್ಲಿಮೆಂಟಿನ ನೆರವಿಲ್ಲದೆ, ಅದನ್ನು ಕರೆಯದೆ ಆಳಿದ. ಹನ್ನೊಂದು ವರ್ಷಗಳ ಪೀಡಕ ಪ್ರಭುತ್ವ ಎಂದು ಅದನ್ನು ಕರೆಯಲಾಗಿದ್ದರೂ ವಾಸ್ತವವಾಗಿ ಆಗ ಅಂಥ ದುರಾಡಳಿತವೇನೂ ನಡೆದಿರಲಿಲ್ಲ. ದೇಶ ಆ ಕಾಲದಲ್ಲಿ ಸಮೃದ್ಧಿಯ ಪಥದಲ್ಲಿತ್ತು. ಫ್ರಾನ್ಸ್ ಮತ್ತು ಸ್ಪೇನ್‍ಗಳೊಂದಿಗೆ 1630ರಲ್ಲಿ ಶಾಂತಿ ಕೌಲುಗಳಾದುವು. ಪ್ಯೂರಿಟನ್ನರೂ ಕ್ಯಾತೊಲಿಕರೂ ಅನುಕ್ರಮವಾಗಿ ಅಮೆರಿಕದ ಮ್ಯಾಸಚೂಸೆಟ್ಸ್ ಮತ್ತು ಮೇರಿ ಲ್ಯಾಂಡ್‍ಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ವಿದೇಶಿ ವಾಣಿಜ್ಯ ಹೆಚ್ಚುತ್ತಿತ್ತು. ಆದರೆ 1638ರಲ್ಲಿ ಸ್ಕಾಟ್‍ಲೆಂಡ್‍ನಲ್ಲಿ ಬಂಡಾಯ ಸಂಭವಿಸಿತು. ದೊರೆಯ ಧಾರ್ಮಿಕ ನೀತಿಯ ವಿರುದ್ಧ ಸ್ಕಾಚ್ ಜನ ಮಾಡಿದ ಬಿಷಪ್‍ಗಳ ಯುದ್ಧಗಳಲ್ಲಿ (1639, 1640) ದೊರೆಗೆ ಸೋಲಾಗಿ ಆತ ಕದನವಿರಾಮಕ್ಕೆ ಒಪ್ಪಿಕೊಂಡು, ಧನಸಹಾಯ ಕೇಳಲು 1640ರ ಏಪ್ರಿಲ್‍ನಲ್ಲಿ ಪಾರ್ಲಿಮೆಂಟನ್ನು ಕರೆದ. ಅಲ್ಪಾವಧಿಯ ಪಾರ್ಲಿಮೆಂಟ್ ಎಂದು ಪರಿಚಿತವಾದ ಈ ಅಧಿವೇಶನದಲ್ಲಿ ರಾಜ 12 ಬಗೆಯ ಕರಗಳ ಸಂಗ್ರಹಕ್ಕೆ ಅನುಮತಿ ಕೇಳಿದ. ಜನರ ಕುಂದುಕೊರತೆಗಳ ಚರ್ಚೆ ನಡೆಯಬೇಕೆಂದು ಜಾನ್ ಪಿಮ್ ಎಂಬ ನಾಯಕ ಒತ್ತಾಯಿಸಿದನಲ್ಲದೆ ಸ್ಕಾಟ್ಲೆಂಡ್ ಜೊತೆ ಯುದ್ಧವನ್ನು ಮತ್ತೆ ಆರಂಭಿಸುವುದನ್ನು ವಿರೋಧಿಸಿದ. ದೊರೆ ಪಾರ್ಲಿಮೆಂಟನ್ನು ವಿಸರ್ಜಿಸಿ ಷಿಪ್ ಮನಿ ಎಂಬ ಯುದ್ಧ ಕಾಲದಲ್ಲಿ ಕರಾವಳಿಯ ನಿವಾಸಿಗಳಿಂದ ಸಂಗ್ರಹಿಸುತ್ತಿದ್ದ, ಕರದ ಆಕರಣೆಯನ್ನು ಮುಂದುವರಿಸಿದ. ಸ್ಕಾಟ್ಲೆಂಡ್ ಜೊತೆ ಯುದ್ಧ ಮುಂದುವರಿಸಿ ಸೋಲನ್ನುಂಡ. ತಿರುಗಿ ನವೆಂಬರ್ 1640ರಲ್ಲಿ ಪಾರ್ಲಿಮೆಂಟನ್ನು ಕರೆದ ದೀರ್ಘ ಪಾರ್ಲಿಮೆಂಟ್ ಎಂದು ಇದು ಪ್ರಸಿದ್ಧವಾಗಿದೆ. ಷಿಪ್ ಮನಿಯ ವಸೂಲಿಯನ್ನು ಅದು ಖಂಡಿಸಿತು. ದೊರೆಯ ಧರ್ಮನೀತಿಯನ್ನು ಪ್ರತಿಭಟಿಸಿತು. ಐರ್ಲೆಂಡಿನಲ್ಲಿ ದೊರೆ ನೇಮಿಸಿದ್ದ ಪ್ರತಿನಿಧಿ ಸ್ಟ್ಯಾಫರ್ಡನ ವಿಚಾರಣೆಯಾಗಬೇಕೆಂದು ಹೇಳಿಕೆ ಮುಂದಿಟ್ಟಿತು. ಸ್ಟ್ಯಾಫರ್ಡ್ ವಿಚಾರಣೆಗೆ ಒಳಗಾದ. ಅವನ ವಿಚಾರಣೆಯಲ್ಲಿ ಗೆಲುವು ದೊರಕದೆನಿಸಿದಾಗ ಪಾರ್ಲಿಮೆಂಟು ಸರ್ವನಾಶದ ಮಸೂದೆಗೆ (ಬಿಲ್ ಆಫ್ ಅಟೆಯ್‍ಂಡರ್) ಮಂಜೂರಾತಿ ನೀಡಿತು. ಇದರ ಜೊತೆಗೆ, ಸದ್ಯದ ಪಾರ್ಲಿಮೆಂಟು ತನ್ನ ಸ್ವಂತ ನಿರ್ಣಯದ ವಿನಾ ವಿಸರ್ಜಿತವಾಗಲಾರದು ಎಂಬ ಒಂದು ನಿರ್ಣಯವನ್ನೂ ಮಂಜೂರು ಮಾಡಿ ದೊರೆಯ ಸಹಿಗಾಗಿ ಒತ್ತಾಯಪಡಿಸಿತು. ದೊರೆ ವಿಧಿಯಿಲ್ಲದೆ ಸಹಿ ಹಾಕಿದ. ಸ್ಟ್ಯಾಫರ್ಡ್ ಮರಣದಂಡನೆಗೆ ಗುರಿಯಾದ.

1641ರ ನವೆಂಬರಿನಲ್ಲಿ ಕಾಮನ್ಸ್ ಸಭೆ ಮತ್ತೆ ಸೇರಿ, ಚಾಲ್ರ್ಸ್ ಪಟ್ಟವೇರಿ ಬಂದಾಗಿನಿಂದ ಅದುವರೆಗಿನ ಅವನ ಎಲ್ಲ ಕೃತಿಗಳಿಗಾಗಿ ಅವನ್ನು ಖಂಡಿಸುವ ಗ್ರ್ಯಾಂಡ್ ರೆಮಾನ್‍ಸ್ಟ್ರೆನ್ಸ್ ಎಂಬ ನಿರ್ಣಯವನ್ನು 159 ಪರ, 148 ವಿರುದ್ಧ ಮತಗಳಿಂದ ಸ್ವೀಕರಿಸಿತು. ಇದೇ ಕಾಲಕ್ಕೆ ಐರ್ಲೆಂಡಿನಲ್ಲಿ ಬಂಡಾಯವಾಯಿತು. ದೊರೆ ತನ್ನ ಸೇನಾಧಿಕಾರವನ್ನು ಬಿಟ್ಟುಕೊಡಬೇಕೆಂಬುದು ಪಾರ್ಲಿಮೆಂಟಿನ ಕೇಳಿಕೆಯಾಗಿತ್ತು. ರಾಣಿಯನ್ನೂ ವಿಚಾರಣೆಗೊಳಪಡಿಸುವುದು ಅದರ ಯೋಜನೆ. ಇದನ್ನರಿತ ದೊರೆ, ಕಾಮನ್ಸ್ ಸಭೆಯ ಸದಸ್ಯರನ್ನೇ ಬಂಧಿಸಬೇಕೆಂದು ಸೇನೆಯೊಡನೆ ಪಾರ್ಲಿಮೆಂಟಿಗೆ ಬಂದ. ಆದರೆ ಆ ಸದಸ್ಯರು ತಲೆತಪ್ಪಿಸಿಕೊಂಡಿದ್ದರು. ಇದರಿಂದ ಅಂತರ್ಯುದ್ಧಕ್ಕೆ ಹಾದಿಯಾಯಿತು. ಪಾರ್ಲಿಮೆಂಟರಿ ಸೇನೆಗಳು ದೊರೆಯ ಪಡೆಗಳನ್ನು ಹಲವು ಕದನಗಳಲ್ಲಿ ಸೋಲಿಸಿದುವು. 1649ರಲ್ಲಿ ದೊರೆ ಸೆರೆಸಿಕ್ಕಿದ. ವಿಶೇಷ ಉಚ್ಚ ನ್ಯಾಯಾಲಯವೊಂದು ಅವನನ್ನು ವಿಚಾರಣೆಗೆ ಗುರಿಪಡಿಸಿ. 1649ರ ಜನವರಿ 27ರಂದು ಅವನಿಗೆ ಮರಣದಂಡನೆ ವಿಧಿಸಿತು. ದೊರೆಯನ್ನು ಈ ಲೋಕದಲ್ಲಿ ಯಾವ ನ್ಯಾಯಾಲಯವೂ ವಿಚಾರಣೆಗೆ ಗುರಿಪಡಿಸಲಾರದೆಂದು ವಾದಿಸಿದ ಚಾಲ್ರ್ಸ್ ತಾನೊಬ್ಬ ಹುತಾತ್ಮನೆಂದೇ ಭಾವಿಸಿ ಮರಣವನ್ನಪ್ಪಿದ. ಕುಳ್ಳನಾಗಿದ್ದ, ಕೊಂಚ ಉಗ್ಗುತ್ತಿದ್ದ ಚಾಲ್ರ್ಸ್ ಚಿತ್ರಕಲೆಯ ಆರಾಧಕನಾಗಿದ್ದ. ವ್ಯಾನ್ ಡೈಕ್, ರೂಬೆನ್ಸ್ ಮುಂತಾದ ಕಲಾವಿದರಿಗೆ ಆತ ಆಶ್ರಯ ನೀಡಿದ್ದ. ಕುದುರೆ ಸವಾರಿಯಲ್ಲೂ ಬೇಟೆಗಳಲ್ಲೂ ಅವನಿಗೆ ಆಸಕ್ತಿಯಿತ್ತು.

ಚಾಲ್ರ್ಸ್ II : 1630-1685. ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ದೊರೆ (1660-1685). 1ನೆಯ ಚಾಲ್ರ್ಸ್‍ನ ಮಗ. ಈತ ಬ್ರಿಟನಿನ ಅಂತರ್ಯುದ್ಧದ ಅನಂತರ ದೇಶಭ್ರಷ್ಟನಾಗಿದ್ದು, ರಕ್ಷಕ ಶಾಸನ (ಪ್ರೊಟೆಕ್ಟೊರೇಟ್) ಕೊನೆಗೊಂಡು ರಾಜತ್ವ ಮತ್ತೆ ಸ್ಥಾಪನೆಯಾದಾಗ 1660ರಲ್ಲಿ ಪಟ್ಟಕ್ಕೆ ಬಂದ. ತಂದೆ 1ನೆಯ ಚಾಲ್ರ್ಸನ ಆಳ್ವಿಕೆಯ ಕಾಲದಲ್ಲಿ ಈತ ದೇಶತ್ಯಾಗ ಮಾಡಬೇಕಾಯಿತು. ಅಲ್ಲಲ್ಲಿ ಅಲೆದಾಡಿ 1646ರಲ್ಲಿ ಪ್ಯಾರಿಸಿಗೆ ಬಂದ. ಅಲ್ಲಿ ತನ್ನ ತಾಯಿಯ ಮೇಲ್ವಿಚಾರಣೆಯಲ್ಲಿ ಶಿಕ್ಷಣ ಪಡೆದ. ತಂದೆಯ ಜೀವವನ್ನು ಉಳಿಸಲು ಇವನು ಮಾಡಿದ ಪ್ರಯತ್ನಗಳೂ ಮನವಿಗಳೂ ಫಲಿಸಲಿಲ್ಲ. ಒಂದನೆಯ ಚಾಲ್ರ್ಸ್ ಮರಣದಂಡನೆಗೆ ಗುರಿಯಾದ ಮೇಲೆ ಇವವನ್ನು ರಾಜಪಕ್ಷದವರು ದೊರೆಯೆಂದು ಘೋಷಿಸಿದರಾದರೂ ಇವನು ಅಸಹಾಯಕ ಸ್ಥಿತಿಯಲ್ಲೇ ಇದ್ದ. ಸ್ಕಾಟ್ಲೆಂಡಿಗೆ ತೆರಳಿ ಅಲ್ಲಿಯ ದೊರೆಯೆಂದು ಕಿರೀಟಧಾರಣೆ ಮಾಡಿಸಿಕೊಂಡ. ಅಲ್ಲಿಂದ ಇಂಗ್ಲೆಂಡಿನ ಮೇಲೆ ನಡೆಸಿದ ದಂಡಯಾತ್ರೆ ವಿಫಲವಾಯಿತು. ಆಲಿವರ್ ಕ್ರಾಮ್ವೆಲ್ ಇವನನ್ನು ಸೋಲಿಸಿದ. ಇವನು ಫ್ರಾನ್ಸಿಗೆ ಪಲಾಯನ ಮಾಡಿದ. ತಾಯಿಯೊಂದಿಗೂ ಜಗಳವಾಡಿದ. ಕ್ರಾಮ್ವೆಲನ ರಾಜ ತಂತ್ರಕುಶಲತೆಯಿಂದಾಗಿ ಇವನಿಗೆ ಫ್ರಾನ್ಸ್ ಮತ್ತು ನೆದರ್ಲೆಂಡ್‍ಗಳ ಬೆಂಬಲ ದೊರಕಲಿಲ್ಲ. ಸ್ಪೇನಿನ ಸಹಾಯ ಪಡೆದು ಸ್ಪ್ಯಾನಿಷ್ ನೆದರ್ಲೆಂಡ್ಸಿನಲ್ಲಿ ನೆಲೆನಿಂತ. ಕ್ರಾಮ್ವೆಲನ ಮರಣಾನಂತರ ಇಂಗ್ಲೆಂಡಿನಲ್ಲಿ ಆದ ಬದಲಾವಣೆಗಳ ಪರಿಣಾಮವಾಗಿ ಪಾರ್ಲಿಮೆಂಟ್ ಇವನನ್ನು ಮತ್ತೆ ಇಂಗ್ಲೆಂಡಿಗೆ ಬಂದು ಆಳಬೇಕೆಂದು ಆಮಂತ್ರಿಸಿತು. ಮೇ 1660ರಲ್ಲಿ ಇವನನ್ನು ಇಂಗ್ಲೆಂಡಿನ ದೊರೆಯೆಂದು ಘೋಷಿಸಲಾಯಿತು. ಏಪ್ರಿಲ್ 1661ರಲ್ಲಿ ಇವನಿಗೆ ಕಿರೀಟಧಾರಣೆಯಾಯಿತು. ಪೋರ್ಚುಗಲ್ ರಾಜಕುಮಾರಿ ಕ್ಯಾದರಿನ್ ಬ್ರಗಾಂಜಳನ್ನು ಈತ ವರಿಸಿದ. 3 ಲಕ್ಷ ಪೌಂಡುಗಳ ವರದಕ್ಷಿಣೆಯ ಜೊತೆಗೆ ಮುಂಬೈ, ಟಾಂಜಿಯರ್‍ಗಳು ಉಡುಗೊರೆಯಾಗಿ ಬಂದವು. ಎಡ್ವರ್ಡ್ ಹೈಡನನ್ನು ಚಾಲ್ರ್ಸ್ ತನ್ನ ಚಾನ್ಸಲರ್ ಆಗಿ ಆಯ್ಕೆ ಮಾಡಿ ಅವನನ್ನು ಕ್ಲ್ಯಾರೆಂಡನನ ಅರ್ಲ್ ಆಗಿ ನೇಮಿಸಿದ. ಆದರೆ ರಾಜನಿಗೂ ಪಾರ್ಲಿಮೆಂಟಿಗೂ ನಡುವೆ ರಾಜಕೀಯ ವಿಚಾರಗಳಲ್ಲೂ ಧಾರ್ಮಿಕ ವಿಚಾರಗಳಲ್ಲೂ ತೀವ್ರ ಭಿನ್ನಾಭಿಪ್ರಾಯಗಳಿದ್ದುವು. ಪಾರ್ಲಿಮೆಂಟ್ ಉಗ್ರವಾಗಿ ಆಂಗ್ಲಿಕನ್ ಸಂಪ್ರದಾಯವನ್ನು ಇತ್ತಿ ಹಿಡಿದು ಇನ್ನೆಲ್ಲ ಪಂಥಗಳನ್ನೂ ಹತ್ತಿಕ್ಕುವ ವಿಚಾರ ಹೊಂದಿತ್ತು. ಚಾಲ್ರ್ಸ್ ಕ್ಯಾತೊಲಿಕ್ ಸಂಪ್ರದಾಯದ ಬಗ್ಗೆ ಸಹಾನುಭೂತಿಯುಳ್ಳವನಾಗಿದ್ದು, ಧಾರ್ಮಿಕ ಸಹಿಷ್ಣುತೆಯನ್ನು ಜಾರಿಗೆ ತರಬೇಕೆಂದಿದ್ದ. ಆದರೆ ಪಾರ್ಲಿಮೆಂಟು 1162ರಲ್ಲಿ ಮತ್ತು 1673ರಲ್ಲಿ ಎರಡು ಅಧಿನಿಯಮಗಳನ್ನು ಸ್ವೀಕರಿಸಿ, ಆಂಗ್ಲಿಕನರಲ್ಲದವರ ಧಾರ್ಮಿಕ ಸ್ವಾತಂತ್ರ್ಯಗಳನ್ನು ಕಸಿದುಕೊಂಡಿತು. ಇದೇ ಕಾಲಕ್ಕೆ 1665ರಲ್ಲಿ ಹಾಲೆಂಡಿನ ವಿರುದ್ಧ ಇಂಗ್ಲೆಂಡು ಯುದ್ಧ ಘೋಷಿಸಿ ಸೋಲನ್ನುಂಡಿತು. ಡಚ್ ನೌಕಾದಳ ಥೇಮ್ಸ್ ನದಿಯನ್ನು ಪ್ರವೇಶಿಸಿ ಲಂಡನ್ನಿನ ಚಟುವಟಿಕೆಯನ್ನು ಸ್ಥಗಿತಗೊಳಿಸಿತು. ಈ ಸೋಲಿಗಾಗಿ ರಾಜನನ್ನು ಆತನ ಸೋದರನೂ ಬ್ರಿಟನಿನ ನೌಕಾ ಸೇನಾನಿಯೂ ಆಗಿದ್ದ ಚೇಮ್ಸ್‍ನನ್ನೂ ಟೀಕಿಸಲಾಯಿತು. ಯುದ್ಧ ಮುಂದುವರಿಯುತ್ತಿದ್ದಂತೆ ಬ್ರಿಟನಿನಲ್ಲಿ ವ್ಯಾಪಕವಾಗಿ ಪ್ಲೇಗ್ ಪಿಡುಗು ಕಾಣಿಸಿಕೊಂಡು ಸಾವಿರಾರು ಜನರು ಸತ್ತರು. ಮರುವರ್ಷ ಲಂಡನ್ನಿನಲ್ಲಿ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಿಂದಾಗಿ ಸೇಂಟ್ ಪಾಲ್ಸ್ ಕಥೀಡ್ರಲೂ ಸೇರಿ ಲಂಡನ್ನಿನ ಬಹುಭಾಗ ನಾಶವಾಯಿತು. ಜನ ತೀರ ಅಸಮಾಧಾನಗೊಂಡರು. ಡಚ್ ಯುದ್ಧ ಮುಗಿದಾಗ ಕ್ಲ್ಯಾರೆಂಡನನನ್ನು ಚಾಲ್ರ್ಸ್ ಕಿತ್ತೊಗೆಯಬೇಕಾಯಿತು. ಪಾರ್ಲಿಮೆಂಟಿನ ಹಿಡಿತದಿಂದ ಬೇಸತ್ತು ರಾಜ 1670ರ ಮೇ ತಿಂಗಳಲ್ಲಿ ಇಂಗ್ಲೆಂಡಿನ ವೈರಿಯಾದ, ಫ್ರಾನ್ಸಿನ ದೊರೆ 14ನೆಯ ಲೂಯಿಯ ಜೊತೆ ಡೋವರ್ ಗುಪ್ತ ಕೌಲು ಮಾಡಿಕೊಂಡ. ಈ ಕೌಲಿನಂತೆ ಕ್ಯಾತೊಲಿಕರಿಗೆ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯ ನೀಡಲು ರಾಜ ಒಪ್ಪಿಕೊಂಡ; ಫ್ರಾನ್ಸಿಗೆ ಅನುಕೂಲವಾದ ವಿದೇಶ ನೀತಿಯನ್ನು ಅನುಸರಿಸಲು ಸಮ್ಮತಿಸಿದ. ಲೂಯಿ ಚಾಲ್ರ್ಸನಿಗೆ ಆರ್ಥಿಕ ನೆರವು ನೀಡಲು ಮುಂದಾದ. ಇದರಿಂದ ಹಣಕ್ಕಾಗಿ ಚಾಲ್ರ್ಸ್ ಪಾರ್ಲಿಮೆಂಟನ್ನು ಅವಲಂಬಿಸಬೇಕಾಗಿರಲಿಲ್ಲ. ಈ ದೇಶಘಾತಕ ಒಪ್ಪಂದವೇ 2ನೆಯ ಜೇಮ್ಸನ ಕಾಲದ ಆಪಾಯಕರ ಬೆಳೆವಣಿಗೆಗಳಿಗೆ ಕಾರಣವಾಯಿತೆಂದು ಒಬ್ಬ ಇತಿಹಾಸಕಾರ ಹೇಳಿದ್ದಾನೆ. 1772ರಲ್ಲಿ ಲೂಯಿಯ ಇಚ್ಛೆಯಂತೆ ಚಾಲ್ರ್ಸ್ ಹಾಲೆಂಡಿನ ವಿರುದ್ದ ಯುದ್ಧ ಘೋಷಿಸಿದ. ಇದನ್ನು ಬ್ರಿಟನ್ನಿನ ಜನ ಮೆಚ್ಚಲಿಲ್ಲ. ಡೋವರ್‍ಕೌಲಿನ ಗೌಪ್ಯ ಶೀಘ್ರವೇ ಬಯಲಾಯಿತು. ಇದರಿಂದ ಪಾರ್ಲಿಮೆಂಟ್ ಮತ್ತು ಆಂಗ್ಲಿಕನ್ ಪಕ್ಷದವರು ರಾಜನ ವಿರುದ್ಧ ಸಿಡಿದೆದ್ದರು. ಕ್ಯಾತೊಲಿಕರಿಗೆ ಸ್ವಾತಂತ್ರ್ಯ ನೀಡುವ ರಾಜನ ಯತ್ನವನ್ನು ಅವರು ವಿಫಲಗೊಳಿಸಿದರು. ಕ್ಯಾತೊಲಿಕರ ವಿರುದ್ಧ ಅಪಪ್ರಚಾರ ಆರಂಭವಾಯಿತು. ಲಂಡನ್ನಿನ ಅಗ್ನಿಕಾಂಡಕ್ಕೆ ಕ್ಯಾತೊಲಿಕರೇ ಕಾರಣವೆಂದು ಹೇಳಲಾರಂಭವಾಯಿತು. ಟೇಟಸ್ ಓಟ್ಸ್ ಎಂಬ ಒಬ್ಬ ಆಂಗ್ಲಿಕನ್ ಪಾದ್ರಿ ಪೋಪಿಕ್ ಪಿತೂರಿ ಎಂಬ ವದಂತಿಯೊಂದನ್ನು ಹುಟ್ಟಿಸಿದ. ರಾಜನನ್ನೂ ಪ್ರಾಟೆಸ್ಟಂಟ್ ರಾಜಕಾರಣಿಗಳನ್ನೂ ಕೊಲೆ ಮಾಡಿ ಇಂಗ್ಲೆಂಡನ್ನು ಜೆಸುಯಿಟರಿಗೆ ಒಪ್ಪಿಸಲು ಕ್ಯಾತೊಲಿಕರು (ಪೋಪನ ಅನುಯಾಯಿಗಳು)ಪಿತೂರಿ ನಡೆಸಿದ್ದಾರೆಂದು ಆಪಾದಿಸಲಾಯಿತು. ಇದೇ ಕಾಲಕ್ಕೆ ರಾಜನ ಸೋದರನೂ ಸಿಂಹಾಸನದ ಉತ್ತರಾಧಿಕಾರಿಯೂ ಕ್ಯಾತೊಲಿಕನೂ ಆದ ಜೇಮ್ಸನನ್ನು ಸಿಂಹಾಸನಾರೋಹಣ ಮಾಡದಂತೆ ತಡೆಯಬೇಕೆಂಬ ಉದ್ದೇಶದಿಂದ ಎಕ್ಸ್‍ಕ್ಲೂಷನ್ ಮಸೂದೆಯನ್ನು ಮಂಡಿಸಲು ಪಾರ್ಲಿಮೆಂಟಿನಲ್ಲಿ ಯತ್ನ ನಡೆಯಿತು. 1679ರಲ್ಲಿ ಮಂಡಿಸಿದ ಈ ಮಸೂದೆ ಕಾಮನ್ಸ್ ಸಭೆಯಲ್ಲಿ ಮಂಜೂರಾದರೂ ಲಾಡ್ರ್ಸ್ ಸಭೆಯಲ್ಲಿ ತಿರಸ್ಕøತವಾಯಿತು. ಮಸೂದೆಯ ಸಮರ್ಥಕರನ್ನು ವಿಗ್‍ಗಳೆಂದೂ ವಿರೋಧಿಗಳನ್ನು ಟೋರಿಗಳೆಂದೂ ಹೀಗಳೆಯಲಾಯಿತು. ಇದೇ ಮುಂದಿನ ಪಕ್ಷಪದ್ಧತಿಗೆ ತಳಹದಿ. ಈ ಚಟುವಟಿಕೆಯಿಂದ ಬೇಸತ್ತ ಚಾಲ್ರ್ಸ್ ಪಾರ್ಲಿಮೆಂಟನ್ನು ವಿಸರ್ಜಿಸಿದ (1681), ತನ್ನ ಜೀವನದ ಉಳಿದ ವರ್ಷಗಳಲ್ಲಿ ಚಾಲ್ರ್ಸ್ ಪಾರ್ಲಿಮೆಂಟಿನ ನೆರವಿಲ್ಲದೆ ಆಳಿದ. ಫ್ರಾನ್ಸಿನ ಲೂಯಿಯ ಜೊತೆಗೆ ಮತ್ತೆ ಒಪ್ಪಂದ ಮಾಡಿಕೊಂಡು ಅವನಿಂದ ಧನಸಹಾಯ ಪಡೆದ. ಈ ನಡುವೆ ಪೋಪಿಕ್ ಪಿತೂರಿ ಕಟ್ಟುಕತೆಯೆಂಬುದು ಮನವರಿಕೆಯಾಗಿ ವಿಗ್ ಪಕ್ಷದವರು ಗೌರವ ಕಳೆದುಕೊಂಡರು. ರಾಜನ ಪರವಾಗಿ ಸಾರ್ವಜನಿಕಾಭಿಪ್ರಾಯ ರೂಪಿತವಾಯಿತು. 1685ರಲ್ಲಿ ಆತ ತೀರಿಕೊಂಡಾಗ ಅವನ ಸೋದರ ಜೇಮ್ಸ್ ಪಟ್ಟಕ್ಕೆ ಬರಲು ಕಷ್ಟವಾಗಲಿಲ್ಲ. 

ಚಾಲ್ರ್ಸನಿಗೆ ಸ್ವಪತ್ನಿಯಲ್ಲಿ ಮಕ್ಕಳಿರಲಿಲ್ಲವಾದರೂ ಅವನ ಉಪಪತ್ನಿಯರ ಮೂಲಕ ಅವನಿಗೆ 14 ಜನ ಮಕ್ಕಳಿದ್ದರು. ಎತ್ತರದ ಆಧಾರದ, ಸುಂದರನಾದ ಮತ್ತು ವಿನೋದಪರನಾದ ಚಾಲ್ರ್ಸ್ ವಿಲಕ್ಷಣ ವ್ಯಕ್ತಿ. ಸ್ಟುವರ್ಟ್ ದೊರೆಗಳಲ್ಲೇ ಈತ ಸಮರ್ಥನಾದವನು. ಟ್ಯೂಡರ್ ದೊರೆಗಳ ಕಾಲದಲ್ಲಿ ಆರಂಭವಾದ ಪುನರುಜ್ಜೀವನ ಇವನ ಕಾಲದಲ್ಲಿ ಮುಂದುವರಿಯಿತು. ರಾಯಲ್ ಸೊಸೈಟಿ ಆರಂಭವಾದ್ದು ಇವನ ಕಾಲದಲ್ಲೇ (1662). ಇವನ ಆಳ್ವಿಕೆಯ ಸಮಯದಲ್ಲಿ ದೇಶದಲ್ಲಿ ವೈಜ್ಞಾನಿಕ ಚಟುವಟಿಕೆ ಹೆಚ್ಚಿತು. ವಾಣಿಜ್ಯ ಬೆಳೆವಣಿಗೆ, ವಸಾಹತು ಸ್ಥಾಪನೆಗಳು ಭರದಿಂದ ಮುಂದುವರಿದುವು.       (ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ